Monday, February 9, 2009

ಮೊದಲ ಕವನ?

ಮಿತ್ರನೊಬ್ಬ ಬರೆದನೊಂದು ಸುಂದರ ಕವನವ
ಓಡಿಬಂದು ಜಂಭದಿಂದ ತೋರಿಸಿದನು ನನಗವ

ನಾನೇನು ಕಡಿಮೆ... ಅವನದೇನು ಗರಿಮೆ...
ನಾನೂ ಬರೆವೆನು, ನನಗೂ ಉಂಟು ಹಿರಿಮೆ
ಪುಸ್ತಕಗಳನ್ನು ನಾನೂ ಓದಿರುವೆ ಹತ್ತಾರು...
ಅಲ್ಲದೆ ಕನ್ನಡದಲ್ಲಿ ನನಗೆ ಅಂಕ ತೊಂಬತ್ತಾರು

ಅಂದುಕೊಂಡು ಬರೆಯಲು ಕುಳಿತೆನು ಮಂಡೆಯೂರಿ
ಯೋಚಿಸುತ್ತಾ... ಮೆಲ್ಲಗೆ ಮೆಲಕುತ್ತಾ... ಕಡ್ಲೆಪುರಿ,
ನೋಡಬೇಕಿತ್ತು ನನ್ನ ಮೊದಲ ಯತ್ನದ ಪರಿ...
ಆಗುತ್ತಿತ್ತು ಖಂಡಿತ ನಿಮಗೆ ಕಿರಿ-ಕಿರಿ

ಒಂದು ಪದ... ಎರಡು ಪದ... ಕಾಟು-ಗೀಚು...
ಕ್ಷಣಕೊಮ್ಮೆ ನೋಡಿದೆನು ಟೈಂ ಎಷ್ಟೆಂದು ವಾಚು
ನನ್ನ ಕೈಯಿಂದ ಹತಗೈದ ಕಾಗದಗಳೆಷ್ಟು...
ಕವನ ಮುಂದುವರೆದಿದ್ದು ಮಾತ್ರ ಅಷ್ಟಕ್ಕಷ್ಟು

ಕೊನೆಗೆ ಹುಡುಕಲಾರಂಭಿಸಿದೆ ನೆಪವನ್ನು
ತಪ್ಪಿಸಿಕೊಳ್ಳಲು ಕವನ ಬರೆಯುವುದನ್ನು...
ನಂಬಿದರೆ ನಂಬಿ ಬಿಟ್ಟರೆ ಬಿಡಿ:
"ಮುರಿಯಿತು ನನ್ನ Lucky ಪೆನ್ನು !"